‘ರಸ್ತೆ ಮೇಲೆ ಮಲಗಬೇಕಾದರೂ ತೊಂದರೆ ಇಲ್ಲ; ಆದರೆ ಅಮೃತ ಸ್ನಾನ ಮಾಡಿಯೇ ಹೋಗುವೆವು’ ಎಂದು ಅಚಲ ಶ್ರದ್ಧೆಯಿಂದ ಮಹಾಕುಂಭಕ್ಷೇತ್ರಕ್ಕೆ ಬಂದಿರುವ ಭಕ್ತರು !

ಪ್ರಯಾಗರಾಜ ಕುಂಭಮೇಳ 2025

ಶ್ರೀ. ಸಾಗರ ಗರುಡ, ಪ್ರತಿನಿಧಿ, ಪ್ರಯಾಗರಾಜ್

ನಗರದ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಉದ್ಯಾನವನದಲ್ಲಿ ವಾಸಿಸುತ್ತಿರುವ ಭಕ್ತರು

ಪ್ರಯಾಗರಾಜ್, ಜನವರಿ 31 (ಸುದ್ದಿ.) – 144 ವರ್ಷಗಳ ನಂತರ ಬಂದಿರುವ ಮಹಾಕುಂಭ ಮೇಳದಲ್ಲಿ ಅಮೃತ ಸ್ನಾನಕ್ಕಾಗಿ ದೇಶ-ವಿದೇಶಗಳಿಂದ ಕೋಟಿಗಟ್ಟಲೆ ಭಕ್ತರು ಪ್ರತಿದಿನ ಅಪಾರ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುತ್ತಿದ್ದಾರೆ. ಕುಂಭಕ್ಷೇತ್ರದಲ್ಲಿ ಟೆಂಟ್‌ಗಳಲ್ಲಿ ವಾಸ್ತವ್ಯಕ್ಕಾಗಿ ಜಾಗವಿಲ್ಲ. ಈ ಪರಿಸರದಲ್ಲಿ ಹೊಟೇಲ್, ಧರ್ಮಛತ್ರ ಮತ್ತಿತರ ಸ್ಥಳಗಳಲ್ಲಿ ವಾಸ್ತವ್ಯ ಸಿಗದೇ ಇದ್ದರಿಂದ ಅಸಂಖ್ಯಾತ ಭಕ್ತರು ಕುಂಭ ಕ್ಷೇತ್ರದ ರಸ್ತೆಗಳಲ್ಲಿ, ನಗರದ ಪ್ರಮುಖ ರಸ್ತೆಗಳಲ್ಲಿ, ಒಳರಸ್ತೆಗಳಲ್ಲಿ ಕಾರುಗಳನ್ನು ನಿಲ್ಲಿಸಿ ಆ ಕಾರುಗಳಲ್ಲಿ, ರಸ್ತೆ ಪಕ್ಕದಲ್ಲಿನ ಉದ್ಯಾನವನದಲ್ಲಿ, ಅಂಗಡಿಗಳನ್ನು ಮುಚ್ಚಿದ ನಂತರ ಅವರ ಶೆಡ್‌ಗಳಲ್ಲಿ, ಇತ್ಯಾದಿ ಸಿಗುವ ಸ್ಥಳಗಳಲ್ಲಿ ಪ್ಲಾಸ್ಟಿಕ್, ಹಾಸಿಗೆ, ಚಾಪೆ ಹಾಸಿ ಮಲಗುತ್ತಿದ್ದಾರೆ. ಕೊರೆಯುವ ಚಳಿಯಲ್ಲಿ ರಾತ್ರಿ ವಾಸಕ್ಕಾಗಿ ವ್ಯವಸ್ಥೆ ಆಗಿಲ್ಲ, ಆದರೂ ಅಮೃತಸ್ನಾನಕ್ಕಾಗಿ ಇಲ್ಲಿಗೆ ಬಂದಿರುವ ಭಕ್ತರ ದೃಢ ಶ್ರದ್ಧೆ ಕಂಡು ಬರುತ್ತಿದೆ.

1. ರಸ್ತೆ ಬದಿಯ ಉದ್ಯಾನವನದಲ್ಲಿ ವಾಸಿಸುವ ಭಕ್ತರು ಬರುವಾಗ ಮಲಗಲು ಕೆಳಗೆ ಹಾಸುವುದಕ್ಕಾಗಿ ಪ್ಲಾಸ್ಟಿಕ್, ಹಾಸಿಗೆ, ಹೊದಿಕೆಗಳ ಸಮೇತ ಬಂದಿದ್ದಾರೆ.

2. ಧಾನ್ಯಗಳು, ಚಹಾ ಪುಡಿ, ಸಕ್ಕರೆಯಂತಹ ಆಹಾರ ಪದಾರ್ಥಗಳನ್ನು ಜೊತೆಗೆ ತಂದಿದ್ದಾರೆ. ಒಲೆಯನ್ನು ತಯಾರಿಸಿ ತಮ್ಮ ಕುಟುಂಬದವರಿಗೆ ತಿಂಡಿ ಮತ್ತು ಭೋಜನ ತಯಾರಿಸಿ ಕೊಡುವುದೂ ಕಂಡು ಬಂದಿದೆ.

3. ಈ ಕ್ಷೇತ್ರದಲ್ಲಿ ಪರಿಸರವನ್ನು ಸ್ವಚ್ಛಗೊಳಿಸಲು ಆಡಳಿತವು ನೈರ್ಮಲ್ಯ ಕಾರ್ಮಿಕರನ್ನು ನೇಮಿಸಿದೆ; ಆದರೆ ಭಕ್ತರಿಗೆ ತ್ಯಾಜ್ಯ ವಿಲೇವಾರಿ ಮಾಡುವುದಕ್ಕಾಗಿ ಕಸದ ತೊಟ್ಟಿಗಳಾಗಲಿ ಅಥವಾ ದೊಡ್ಡ ಕಸದ ಚೀಲಗಳಾಗಲಿ ಇಲ್ಲ. ಹೀಗಾಗಿ ಭಕ್ತರು ಎಲ್ಲೆಂದರಲ್ಲಿ ಸಿಕ್ಕ ಸ್ಥಳಗಳಲ್ಲಿ ಕಸವನ್ನು ಎಸೆಯುತ್ತಿದ್ದಾರೆ.

4. ಇಷ್ಟೊಂದು ಭಾರಿ ಸಂಖ್ಯೆಯಲ್ಲಿ ಭಕ್ತಾದಿಗಳು ಬರುವುದರಿಂದ ಅವರಿಗೆ ಶೌಚಾಲಯಗಳು ಲಭ್ಯವಾಗಿಲ್ಲ. ಹೀಗಾಗಿ ರಸ್ತೆಯ ಅಕ್ಕಪಕ್ಕದಲ್ಲಿಯೇ ಪ್ರಾತಃವಿಧಿಗಾಗಿ ಹೋಗುತ್ತಿರುವುದರಿಂದ ಅಲ್ಲಿ ದುರ್ವಾಸನೆ ಹರಡುತ್ತಿದೆ. (ಆಡಳಿತವು ತಾತ್ಕಾಲಿಕ ಶೌಚಾಲಯಗಳನ್ನು ಸ್ಥಾಪಿಸುವ ಮೂಲಕ ಈ ಸಮಸ್ಯೆಯನ್ನು ಪರಿಹರಿಸುವುದು ಅಪೇಕ್ಷಿತವಾಗಿದೆ! – ಸಂಪಾದಕರು)