ಭಕ್ತರು ಯಾವ ಸೆಕ್ಟರನಲ್ಲಿ ಸ್ನಾನ ಮಾಡುವರೋ ಅಲ್ಲಿಂದಲೇ ಅವರನ್ನು ಅವರ ಗಮ್ಯಸ್ಥಾನಕ್ಕೆ ಕಳುಹಿಸಲಾಗುವುದು !

ಮೌನಿ ಅಮಾವಾಸ್ಯೆಯ ದಿನದಂದು ಪ್ರಯಾಗರಾಜನಲ್ಲಿ ‘ಸಂಗಮ ನೋಸ’ ನಲ್ಲಿ ಜನದಟ್ಟಣೆ ತಪ್ಪಿಸಲು ಆಡಳಿತದಿಂದ ನಿರ್ಧಾರ

ಪ್ರಯಾಗರಾಜ(ಉತ್ತರ ಪ್ರದೇಶ) – ಮೌನಿ ಅಮಾವಾಸ್ಯೆಯ ದಿನವು ಮಹಾಕುಂಭ ಮೇಳದ ಎರಡನೇ ಮತ್ತು ಅತಿದೊಡ್ಡ ಅಮೃತ ಸ್ನಾನವಾಗಿರುವುದರಿಂದ ಆ ದಿನದಂದು ಅಮೃತ ಸ್ನಾನಕ್ಕೆ 10 ಕೋಟಿ ಭಕ್ತರು ಬರುತ್ತಾರೆ ಎಂದು ಆಡಳಿತ ಅಂದಾಜಿಸಿದೆ, ಈ ಹಿನ್ನೆಲೆಯಲ್ಲಿ, ಭದ್ರತೆ ಮತ್ತು ಸುವ್ಯವಸ್ಥೆಗಾಗಿ ಪೊಲೀಸರು ಮತ್ತು ಆಡಳಿತ ಕೊಂಟಕಟ್ಟಿ ನಿಂತಿದೆ. ತ್ರಿವೇಣಿ ಸಂಗಮದ ಸ್ಥಳವಾದ ‘ಸಂಗಮ ನೋಸ’ ಸ್ಥಳದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿರುವುದರಿಂದ, ಈ ಜನದಟ್ಟಣೆಯನ್ನು ತಪ್ಪಿಸಲು, ಭಕ್ತರನ್ನು ಅವರು ಯಾವ ಸೆಕ್ಟರನಿಂದ ಸ್ನಾನ ಮಾಡುತ್ತಾರೆಯೋ, ಆ ಸೆಕ್ಟರ್ ದಿಂದಲೇ ಸ್ನಾನದ ಬಳಿಕ ಅವರ ಗಮ್ಯಸ್ಥಾನಕ್ಕೆ ಕಳುಹಿಸಲು ಆಡಳಿತ ನಿರ್ಧರಿಸಿದೆ. ಮಹಾಕುಂಭ ಕ್ಷೇತ್ರದಲ್ಲಿ 25 ಸೆಕ್ಟರಗಳಿದ್ದು, ಭಕ್ತರ ಅನುಕೂಲಕ್ಕಾಗಿ 12 ಕಿ.ಮೀ. ಉದ್ದನೆಯ ಘಾಟ್‌ಗಳನ್ನು ಸಿದ್ಧಪಡಿಸಲಾಗಿದೆ. ಪ್ರತಿ ಸ್ಥಳದಲ್ಲಿಯೂ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗಿದೆ.

ಭಕ್ತರು ಯಾವ ಸೆಕ್ಟರನಲ್ಲಿ ಸ್ನಾನ ಮಾಡುತ್ತಾರೆಯೋ ಅಲ್ಲಿಂದಲೇ ಅವರನ್ನು ಅವರ ಗಮ್ಯಸ್ಥಾನಕ್ಕೆ ಕಳುಹಿಸಬೇಕು ಮತ್ತು ಜನವರಿ 27 ರಿಂದ 29 ರವರೆಗೆ ಅವರನ್ನು ಯಾವುದೇ ಸಂದರ್ಭದಲ್ಲೂ ಸಂಗಮ ನೋಸ ಅಥವಾ ಬೇರೆ ಯಾವುದೇ ಸ್ಥಳಕ್ಕೆ ಹೋಗಲು ಅವಕಾಶ ನೀಡಬಾರದು ಎಂದು ಆಡಳಿತವು ಎಲ್ಲಾ ಪೊಲೀಸ್ ಮತ್ತು ಸೆಕ್ಟರ್ ಮುಖ್ಯಸ್ಥರಿಗೆ ಸ್ಪಷ್ಟ ಸೂಚನೆಗಳನ್ನು ನೀಡಿದೆ. ಭಕ್ತರಿಗೆ ಅನುಕೂಲಕರ ಮತ್ತು ಸುಲಭವಾದ ಸ್ನಾನದ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಆಡಳಿತವು ಸ್ಪಷ್ಟಪಡಿಸಿದೆ.

ಆಡಳಿತದ ಸೂಚನೆಯಂತೆ ಭಕ್ತರ ಅನುಕೂಲಕ್ಕಾಗಿ 12 ಕಿ.ಮೀ. ಉದ್ದದ ಘಾಟಗಳನ್ನು ನಿರ್ಮಿಸಲಾಗಿದೆ. ಘಾಟ್‌ಗಳಲ್ಲಿ ಜನದಟ್ಟಣೆ ತಪ್ಪಿಸಲು ಸ್ವತಂತ್ರ ತಂಡಗಳನ್ನು ರಚಿಸಲಾಗಿದೆ. ಇದರೊಂದಿಗೆ, ಘಾಟ್‌ಗಳಲ್ಲಿನ ಜನದಟ್ಟಣೆ ಕಡಿಮೆ ಮಾಡಲು ಮೂಲಸೌಕರ್ಯಗಳನ್ನು ಮತ್ತಷ್ಟು ಹೆಚ್ಚಿಸಲಾಗುವುದು. ಬ್ಯಾರಿಕೇಡಿಂಗ್, ಜಲ ಪೊಲೀಸರು, ವಾಚ್ ಟಾವರ್, ದೀಪ, ಸೂಚನಾ ಫಲಕಗಳು, ಶೌಚಾಲಯಗಳು, ಬಟ್ಟೆ ಬದಲಾಯಿಸುವ ಕೊಠಡಿಗಳು, ನೈರ್ಮಲ್ಯ ಇತ್ಯಾದಿ ವ್ಯವಸ್ಥೆಗಳನ್ನು ಸಹ ಮಾಡಲಾಗುವುದು.