Pakistan Kite Flying Punishment : ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಗಾಳಿಪಟ ಹಾರಿಸಿದರೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸುವ ಕಾನೂನು ಜಾರಿ

ಲಾಹೋರ್ (ಪಾಕಿಸ್ತಾನ) – ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ವಿಧಾನ ಸಭೆಯು ಗಾಳಿಪಟಗಳ ಬಗ್ಗೆ ಒಂದು ಮಸೂದೆಯನ್ನು ಅಂಗೀಕರಿಸಿದೆ. ಇದರ ಪ್ರಕಾರ, ಗಾಳಿಪಟ ಹಾರಿಸುವಾಗ ಸಿಕ್ಕಿಬಿದ್ದರೆ 3 ರಿಂದ 5 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 20 ಲಕ್ಷ ಪಾಕಿಸ್ತಾನಿ ರೂಪಾಯಿ (6 ಲಕ್ಷ ಭಾರತೀಯ ರೂಪಾಯಿ) ದಂಡ  ಅಥವಾ ಎರಡೂ ಶಿಕ್ಷೆ ವಿಧಿಸಬಹುದು. ದಂಡವನ್ನು ಪಾವತಿಸದಿದ್ದಲ್ಲಿ ಒಂದು ವರ್ಷದ ಹೆಚ್ಚುವರಿ ಜೈಲು ಶಿಕ್ಷೆ ಆಗಬಹುದು. ಗಾಳಿಪಟಗಳನ್ನು ತಯಾರಿಸುವ ಮತ್ತು ಅವುಗಳ ಮಾರಾಟ ಮಾಡುವವರಿಗೆ 5 ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 50 ಲಕ್ಷ ರೂಪಾಯಿ ದಂಡ ಅಥವಾ ಎರಡೂ ಶಿಕ್ಷೆಗಳನ್ನು ವಿಧಿಸಬಹುದು.  ದಂಡ ಪಾವತಿಸದಿದ್ದರೇ 2 ವರ್ಷಗಳ ಹೆಚ್ಚುವರಿ ಜೈಲು ಶಿಕ್ಷೆಗೆ ಗುರಿಯಾಗಬಹುದು.

1. ಅಪ್ರಾಪ್ತ ವಯಸ್ಕರಿಗೆ ಮೊದಲ ಅಪರಾಧಕ್ಕೆ 50 ಸಾವಿರ ರೂಪಾಯಿ ಮತ್ತು ಎರಡನೇ ಅಪರಾಧಕ್ಕೆ 1 ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು. ಮೂರನೇ ಸಲ ಅಪರಾಧ ಮಾಡಿದರೆ 2018ರ ಬಾಲಾಪರಾಧ ನ್ಯಾಯ ಕಾಯಿದೆ ಪ್ರಕಾರ ಶಿಕ್ಷಿಸಲಾಗುತ್ತದೆ.

2. ಈ ಕಾನೂನು ಎಲ್ಲಾ ರೀತಿಯ ನೂಲಿನಿಂದ ತಯಾರಿಸಿದ ಗಾಳಿಪಟಗಳಿಗೆ ಅನ್ವಯಿಸುತ್ತದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಪಂಜಾಬ್ ಸರಕಾರವು ಗಾಳಿಪಟಗಳನ್ನು ತಯಾರಿಸುವುದು, ಹಾರಿಸುವುದು ಮತ್ತು ಮಾರಾಟ ಮಾಡುವುದು ಇದು ಜಾಮೀನು ರಹಿತ ಅಪರಾಧ ಎಂದು ಘೋಷಿಸಿತ್ತು.