Naga Sadhu Diksha in Mahakumbh : ನಾಗ ಸಾಧುಗಳ ದೀಕ್ಷಾ ವಿಧಿಯನ್ನು ವೀಕ್ಷಿಸಲು ನೂರಾರು ಭಕ್ತರ ದಟ್ಟಣೆ !

ಶ್ರೀ. ಸಾಗರ ಗರುಡ, ಪ್ರತಿನಿಧಿ, ಪ್ರಯಾಗರಾಜ್

ಸ್ವಾಮಿ ಅವಧೇಶಾನಂದರ ಸಮ್ಮುಖದಲ್ಲಿ ಗಂಗಾ ಸ್ನಾನ ಮಾಡುವಾಗ ದೀಕ್ಷೆ ತೆಗೆದುಕೊಂಡ ನಾಗಾ ಸಾಧುಗಳು

ಪ್ರಯಾಗರಾಜ್, ಜನವರಿ 19 (ಸುದ್ದಿ.) – ಜನವರಿ 18 ರಂದು ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ಶ್ರೀ ಪಂಚದಶನಾಮ ಜುನಾ ಅಖಾಡಾದ 2 ಸಾವಿರಕ್ಕೂ ಹೆಚ್ಚು ಹೊಸ ಸನ್ಯಾಸಿಗಳು ನಾಗಾ ಸಾಧುಗಳಾಗಿ ದೀಕ್ಷೆ ಪಡೆದರು. ನಾಗಾ ಸಾಧುಗಳಿಗೆ ದೀಕ್ಷೆ ನೀಡುವ ಸಮಾರಂಭವು ಕುಂಭ ಮೇಳದಲ್ಲಿ ಮಾತ್ರ ನಡೆಯುವುದರಿಂದ ಮತ್ತು ನಾಗಾ ಸಾಧುಗಳ ಬಗ್ಗೆ ಅವರ ಕುತೂಹಲದಿಂದಾಗಿ, ನೂರಾರು ಭಕ್ತರು ದೀಕ್ಷೆಯ ವಿಧಿಯನ್ನು ವೀಕ್ಷಿಸಲು ಸೇರಿದ್ದರು. ಶ್ರೀ ಪಂಚದಶನಾಮ ಜುನಾ ಅಖಾಡದ ಪೀಠಾಧೀಶ್ವರ, ಆಚಾರ್ಯ ಮಹಾಮಂಡಲೇಶ್ವರ ಅನಂತ ಶ್ರೀ ವಿಭೂಷಿತ್ ಸ್ವಾಮಿ ಅವಧೇಶಾನಂದಜಿ ಗಿರಿ ಇವರು ಅವರೆಲ್ಲರಿಗೂ ದೀಕ್ಷೆ ನೀಡಿದರು. ಮಧ್ಯರಾತ್ರಿ 1.30 ಕ್ಕೆ ಆರಂಭವಾದ ದೀಕ್ಷಾ ವಿಧಿ ಗಂಗಾನದಿಯಲ್ಲಿ ಸ್ನಾನ ಮಾಡಿದ ನಂತರ ಪೂರ್ಣವಾಯಿತು. ಜನವರಿ 19 ರಂದು ಈ ಕೆಳಗಿನ ಕೆಲವು ವಿಧಿಗಳು ನಡೆಯಲಿವೆ.

ಹೊಸ ನಾಗಾ ಸಾಧುಗಳಿಗೆ ಧರ್ಮ ಧ್ವಜದ ಅಡಿಯಲ್ಲಿ ಪ್ರಾರ್ಥನೆ ಹೇಳುತ್ತಿರುವ ಪೀಠಧೀಶ್ವರ ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಅವಧೇಶಾನಂದ ಗಿರಿಜಿ

ನಾಗಾ ಸಾಧುಗಳಿಂದ ದೀಕ್ಷೆ ಪಡೆಯಲು ಬಂದ ಹೊಸ ಸನ್ಯಾಸಿಗಳು, ಮಧ್ಯಾಹ್ನ ಗಂಗಾನದಿಯಲ್ಲಿ ಸ್ನಾನ ಮಾಡಿದ ನಂತರ, ಶ್ರೀ ಪಂಚದಶನಾಮ ಜುನಾ ಅಖಾಡಕ್ಕೆ ಬಂದು ದಿನವಿಡೀ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ಮಾಡಿದರು. ರಾತ್ರಿ ಶ್ರೀ ಪಂಚದಶನಾಮ ಜುನಾ ಅಖಾಡಕ್ಕೆ ಆಗಮನವಾಯಿತು. ಮಧ್ಯರಾತ್ರಿ ಸುಮಾರು 1 ಗಂಟೆಗೆ, ಎಲ್ಲಾ ಹೊಸ ಸನ್ಯಾಸಿಗಳು, ಧರ್ಮದ ಧ್ವಜದ ಕೆಳಗೆ ಸ್ವಾಮಿ ಅವಧೇಶಾನಂದಜಿಯವರ ಸಮ್ಮುಖದಲ್ಲಿ ಧರ್ಮರಕ್ಷನೆಯ ಕಾರ್ಯಕ್ಕೆ ಕೊಡುಗೆ ನೀಡಲು ಶಕ್ತಿಯನ್ನು ನೀಡುವಂತೆ ಪ್ರಾರ್ಥಿಸಿದರು. ನಂತರ ಗಾಯತ್ರಿ ಮಂತ್ರವನ್ನು ಪಠಿಸಲಾಯಿತು. ಈ ಸಂದರ್ಭದಲ್ಲಿ, ಎಲ್ಲಾ ಸನ್ಯಾಸಿಗಳು ಧರ್ಮ ಧ್ವಜದ ಸ್ಥಳದಲ್ಲಿನ ಅಗ್ನಿಕುಂಡಗಳಲ್ಲಿ ಎಳ್ಳನ್ನು ಅರ್ಪಿಸಿದರು. ನಂತರ ಮಧ್ಯರಾತ್ರಿಯಲ್ಲಿ, ಸ್ವಾಮಿ ಅವಧೇಶಾನಂದಜೀ ಸೇರಿದಂತೆ ಎಲ್ಲಾ ಹೊಸ ಸನ್ಯಾಸಿಗಳೂ ಗಂಗಾನದಿಯ ದಡಕ್ಕೆ ಹೋದರು. ಸ್ವಾಮಿ ಅವಧೇಶಾನಂದಜಿ ‘ಓಂ ನಮೋ ಭಾಗವತೇ’ ಎಂದು ಉಚ್ಚರಿಸಿದ ನಂತರ, ಎಲ್ಲಾ ಹೊಸ ಸನ್ಯಾಸಿಗಳು ಗಂಗಾನದಿಯಲ್ಲಿ ಸ್ನಾನ ಮಾಡಿದರು. ಬಳಿಕ ಅಖಾಡಕ್ಕೆ ಹಿಂತಿರುಗಿ ಧರ್ಮಧ್ವಜಕ್ಕೆ ಪ್ರಾರ್ಥನೆ ಸಲ್ಲಿಸಿ ಸನ್ಯಾಸ ಸ್ವೀಕರಿಸಿದ ನಾಗಾ ಸಾಧುಗಳು ತಮ್ಮ ತಮ್ಮ ಶಿಬಿರಗಳಿಗೆ ಹೋದರು. ದೀಕ್ಷೆ ತೆಗೆದುಕೊಂಡ ನಾಗಾ ಸಾಧುಗಳಲ್ಲಿ ಮಕ್ಕಳು, ದಿವ್ಯಾಂಗ ಮತ್ತು ಹೊಸ ವೃದ್ಧ ಸನ್ಯಾಸಿಗಳೂ ಇದ್ದರು.

ಕೇವಲ ಲಂಗೋಟಿ ಧರಿಸಿ ಕೊರೆಯುವ ಚಳಿಯಲ್ಲಿ ಎಲ್ಲಾ ಧಾರ್ಮಿಕ ವಿಧಿಗಳ ಆಚರಣೆ !

ಬೆಳಗಿನ ಜಾವದಿಂದ ರಾತ್ರಿ 1 ಗಂಟೆಯವರೆಗೆ ಕೊರೆಯುವ ಚಳಿಯಲ್ಲಿ ಎಲ್ಲಾ ಹೊಸ ಸನ್ಯಾಸಿಗಳೂ ವಿಧಿಗಳ ಆರಂಭದಲ್ಲಿ ಮತ್ತು ಇಂದಿನ ವಿಧಿಯ ಕೊನೆಯಲ್ಲಿ ಮಧ್ಯರಾತ್ರಿ ಗಂಗೆಯ ತಣ್ಣನೆಯ ನೀರಿನಲ್ಲಿ ಸ್ನಾನ ಮಾಡಿದರು. ಕೇವಲ ಲಂಗೋಟಿ ಧರಿಸಿದ ಸನ್ಯಾಸಿಗಳು ದೇಹವನ್ನು ಒರೆಸಿಕೊಳ್ಳದೆ ಬರಿಗಾಲಿನಲ್ಲಿ ಜುನಾ ಅಖಾಡದಲ್ಲಿರುವ ಧರ್ಮಧ್ವಜದ ಬಳಿಗೆ ಬಂದು ಬೆಂಕಿಯ ಶಾಖ ತೆಗೆದುಕೊಂಡರು. ಕೊರೆಯುವ ಚಳಿಯಲ್ಲಿ ಬೆಳಗಿನ ಜಾವದಿಂದಲೇ ದಿನವಿಡಿ ಸನ್ಯಾಸಿಗಳು ಕೇವಲ ಲಂಗೋಟಿ ಧರಿಸಿ ಈ ದೀಕ್ಷಾ ವಿಧಿಯನ್ನು ಪೂರ್ಣಗೊಳಿಸಿದರು.

ನಾಗ ಸಾಧುಗಳ ಬಗ್ಗೆ ಭಕ್ತರ ಶ್ರದ್ಧೆ !

ದೀಕ್ಷೆ ತೆಗೆದುಕೊಳ್ಳುತ್ತಿದ್ದ ನಾಗಾ ಸಾಧುಗಳು ಯಾವ ಮಾರ್ಗದಿಂದ ಗಂಗಾ ದಡದಿಂದ ಹೋಗಿ ಬಂದು ಮಾಡುತ್ತಿದ್ದರೋ ಆ ದಾರಿಯ ಮಣ್ಣನ್ನು ಅನೇಕ ಭಕ್ತರು ನಾಗಾ ಸಾಧುಗಳ ಪಾದದ ಧೂಳಿನಂತೆ ತಮ್ಮ ಹಣೆಗೆ ಹಚ್ಚಿಕೊಂಡರು. ಬೆಳಿಗ್ಗೆಯಿಂದ ಮಧ್ಯರಾತ್ರಿಯವರೆಗೆ, ನೂರಾರು ಭಕ್ತರು ಗಂಗಾ ನದಿಯ ದಡದಲ್ಲಿ ಮತ್ತು ಶ್ರೀ ಪಂಚದಶನಮ ಜುನಾ ಅಖಾಡದಲ್ಲಿ ವಿಧಿಯನ್ನು ವೀಕ್ಷಿಸಲು ಉಪಸ್ಥಿತರಿದ್ದರು.