Government Exhibition at Mahakumbh : ಕುಂಭನಗರದಲ್ಲಿನ ಪ್ರದರ್ಶನದ ಮೂಲಕ ವಿವಿಧ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ !

ಪ್ರಯಾಗರಾಜ್, ಜನವರಿ 17 (ಸುದ್ದಿ.) – ಮಹಾಕುಂಭನಗರಿಯಲ್ಲಿ ಅಖಾಡಗಳು, ಸಂಪ್ರದಾಯಗಳು, ಖಾಲ್ಸಾ ಮತ್ತು ಆಧ್ಯಾತ್ಮಿಕ ಸಂಸ್ಥೆಗಳ ಭವ್ಯ ಡೇರೆಗಳನ್ನು ನಿರ್ಮಿಸಲಾಗಿದೆ. ಇದರೊಂದಿಗೆ, ಸರಕಾರವು ಸೆಕ್ಟರ್ 7 ರಲ್ಲಿ ಹಲವಾರು ಭವ್ಯ ಡೇರೆಗಳನ್ನು ಸ್ಥಾಪಿಸಿ ಅವುಗಳ ಮೂಲಕ ಸಾರ್ವಜನಿಕರಿಗೆ ಅನೇಕ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿಯನ್ನು ಲಭ್ಯವಾಗುವಂತೆ ಮಾಡಿದೆ. ಈ ಡೇರೆಯಲ್ಲಿ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಭಾರತ ಸರಕಾರದ ವಿವಿಧ ಯಶಸ್ವಿ ಯೋಜನೆಗಳು, ನೀತಿಗಳು ಮತ್ತು ಸಾರ್ವಜನಿಕ ಕಲ್ಯಾಣ ಯೋಜನೆಗಳ ಬಗ್ಗೆ ಮಾಹಿತಿಯನ್ನು ಒದಗಿಸಿದೆ, ಜೊತೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆಯ ಬಗ್ಗೆ ಮಾಹಿತಿಯನ್ನು ಒದಗಿಸಿದೆ. ಅದೇ ರೀತಿ, ಕೃಷಿ ಇಲಾಖೆ ಮತ್ತು ರೈತ ಕಲ್ಯಾಣ ಸಚಿವಾಲಯದ ಮಳಿಗೆಗಳನ್ನು ಸಹ ಸ್ಥಾಪಿಸಲಾಗಿದೆ. ಈ ಮಾಹಿತಿಯನ್ನು ಡಿಜಿಟಲ್ ಫಲಕಗಳು, ಟಿವಿ ಪರದೆಗಳು, ಹೊಲೊಗ್ರಾಫಿಕ್ ಸಿಲಿಂಡರ್‌ಗಳು ಇತ್ಯಾದಿಗಳ ಮೂಲಕ ಪ್ರದರ್ಶಿಸಲಾಗುತ್ತದೆ.

ರಾಷ್ಟ್ರೀಯ ವಿಪತ್ತು ತಡೆಗಟ್ಟುವಿಕೆ ಪ್ರದರ್ಶನದಲ್ಲಿ ಬೆಂಕಿ, ಭೂಕಂಪ, ಶೀತ, ಕಾಡ್ಗಿಚ್ಚು, ಪ್ರವಾಹದಂತಹ ವಿಪತ್ತುಗಳು ಸಂಭವಿಸಿದಾಗ ಏನು ಮಾಡಬೇಕು ? ಎಂಬುದನ್ನು ಡಿಜಿಟಲ್ ಫಲಕಗಳಿಂದ ತೋರಿಸಲಾಗುತ್ತದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕೊಠಡಿಯು ವಿವಿಧ ಪ್ರಮುಖ ವಿಷಯಗಳ ಮಾಹಿತಿಯನ್ನು ಒದಗಿಸುತ್ತದೆ, ಜೊತೆಗೆ ಮಹಾನ್ ಪುರುಷರ ಜೀವನದ ಮೇಲೆ ಬೆಳಕು ಚೆಲ್ಲುವ ಮಾಹಿತಿಯನ್ನು ಒದಗಿಸುತ್ತದೆ. ಕೃಷಿ ಇಲಾಖೆಯ ಪ್ರದರ್ಶನದಲ್ಲಿ ಒರಟು ಧಾನ್ಯ ಉತ್ಪನ್ನಗಳ ಜೊತೆಗೆ ತರಕಾರಿ ಬೀಜಗಳು ಲಭ್ಯವಿದೆ. ಈ ಪ್ರದರ್ಶನ ನೋಡಲು ಜನದಟ್ಟಣೆಯಾಗುತ್ತಿದೆ.

ಕುಂಭನಗರದಲ್ಲಿ ಹಲವು ರಾಜ್ಯಗಳಿಂದ ತಮ್ಮ ದರ್ಶನ ಮಂಟಪಗಳ ಸ್ಥಾಪನೆ !

ಕುಂಭನಗರದಲ್ಲಿ ಉತ್ತರಾಖಂಡ, ಹರಿಯಾಣ, ಮಧ್ಯಪ್ರದೇಶ, ರಾಜಸ್ಥಾನ ಮುಂತಾದ ರಾಜ್ಯಗಳು ತಮ್ಮ ದರ್ಶನ ಮಂಟಪಗಳನ್ನು ಸ್ಥಾಪಿಸಿವೆ. ಈ ಮಂಟಪಗಳು ಆಯಾ ರಾಜ್ಯಗಳ ಸಂಸ್ಕೃತಿ ಮತ್ತು ಕಲೆಯನ್ನು ಪ್ರದರ್ಶಿಸುತ್ತವೆ. ಉತ್ತರಾಖಂಡ ಸರಕಾರವು ಸ್ಥಾಪಿಸಿರುವ ಪ್ರದರ್ಶನವು ಬದರಿನಾಥ ಮತ್ತು ಕೇದಾರನಾಥದ ಹಿಂದೂ ಧಾರ್ಮಿಕ ತಾಣಗಳ ಬಗ್ಗೆ ಮಾಹಿತಿಯನ್ನು ಒಳಗೊಂಡಿದೆ ಮತ್ತು ಕೆಲವು ಪ್ರತಿಕೃತಿಗಳನ್ನು ನಿರ್ಮಿಸಲಾಗಿದೆ. ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಈ ಸ್ಥಳಕ್ಕೆ ಬರುತ್ತಿದ್ದಾರೆ.