ಕುಂಭ ಮೇಳದಲ್ಲಿ ತಿರುಪತಿಯ ಬಾಲಾಜಿ ದೇವಸ್ಥಾನದ ಭವ್ಯ ಪ್ರತಿಕೃತಿಯ ನಿರ್ಮಾಣ, ಸೇವೆಗಾಗಿ ತಿರುಪತಿಯಿಂದ 250 ಸೇವಕರ ಆಗಮನ !

ಪ್ರಯಾಗರಾಜ ಕುಂಭ ಮೇಳ 2025

ಪ್ರಯಾಗರಾಜ, ಜನವರಿ 16 (ಸುದ್ದಿ.) – ಮಹಾಕುಂಭ ಮೇಳದ ಸೆಕ್ಟರ್ 6 ರಲ್ಲಿ 2.8 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಿಸಲಾದ ತಿರುಪತಿಯ ಬಾಲಾಜಿ ದೇವಾಲಯದ ಭವ್ಯ ಪ್ರತಿಕೃತಿಯು ಎಲ್ಲರ ಆಕರ್ಷಣೆಯ ಕೇಂದ್ರವಾಗುತ್ತಿದೆ. ಇದು ತಿರುಪತಿಯ ಬಾಲಾಜಿ ದೇವಾಲಯದ ಯಥಾವತ್ ಪ್ರತಿಕೃತಿಯಾಗಿದೆ. ವಿಶೇಷವೆಂದರೆ ಕುಂಭ ಮೇಳದಲ್ಲಿ ಈ ದೇವಸ್ಥಾನಕ್ಕೆ ಶ್ರೀ ಬಾಲಾಜಿಯ ಸೇವೆಗಾಗಿ ತಿರುಪತಿ ದೇವಸ್ಥಾನದಿಂದ 250 ಸೇವಕರೂ ಬಂದಿದ್ದಾರೆ. ತಿರುಪತಿಯ ದೇವಸ್ಥಾನದಂತೆ, ಕುಂಭ ಮೇಳದಲ್ಲಿಯೂ ಶ್ರೀ ಬಾಲಾಜಿಯ ಯಥಾವತ್ತಾಗಿ ವಿಧಿಗಳನ್ನು ನಡೆಸಲಾಗುತ್ತಿದೆ.
ಈ ದೇವಸ್ಥಾನದಲ್ಲಿ 9 ಅಡಿ ಎತ್ತರದ ಶ್ರೀ ಬಾಲಾಜಿಯ ವಿಗ್ರಹವನ್ನು ಸ್ಥಾಪಿಸಲಾಗಿದೆ.

ಕುಂಭ ಮೇಳದ ಸಮಯದಲ್ಲಿ, ಸರಕಾರದಿಂದ ಬಾಲಾಜಿ ದೇವಸ್ಥಾನಕ್ಕೆ 5 ಹೆಕ್ಟೇರ್ ಭೂಮಿಯನ್ನು ಒದಗಿಸಿದೆ. ಈ ಭೂಮಿಯಲ್ಲಿ, ಶ್ರೀ ಬಾಲಾಜಿ ದೇವಸ್ಥಾನದ ಜೊತೆಗೆ, ಸಭಾಮಂಟಪ, ಪ್ರಸಾದ ಕೇಂದ್ರ, ಭಗವಂತನ ನೈವೇದ್ಯಕ್ಕಾಗಿ ಭೋಜನಶಾಲೆ ಇತ್ಯಾದಿ ವಿಭಾಗಗಳನ್ನು ನಿರ್ಮಿಸಲಾಗಿದೆ. ಈ ದೇವಾಲಯವನ್ನು ಕೇವಲ 28 ದಿನಗಳಲ್ಲಿ ಸಿಮೆಂಟ್, ಉಕ್ಕು ಮತ್ತು ಪ್ಲೈವುಡ್ ಬಳಸಿ ನಿರ್ಮಿಸಲಾಗಿದೆ. ಈ ದೇವಾಲಯವನ್ನು ನಿರ್ಮಿಸಲು 100 ಕುಶಲಕರ್ಮಿಗಳು ಹಗಲಿರುಳು ಶ್ರಮಿಸಿದ್ದಾರೆ.

ಆಂಧ್ರಪ್ರದೇಶ, ಪ್ರಯಾಗರಾಜ ಇತ್ಯಾದಿ ವಿವಿಧ ಭಾಗಗಳಲ್ಲಿ ದೇವಾಲಯದ ಅವಶೇಷಗಳನ್ನು ಸಿದ್ಧಪಡಿಸಲಾಯಿತು. ಅಲ್ಲಿಂದ ಅದನ್ನು ಕುಂಭ ಮೇಳ ಸ್ಥಳಕ್ಕೆ ತಂದು ಈ ದೇವಸ್ಥಾನವನ್ನು ನಿರ್ಮಿಸಲಾಯಿತು. ದೇವಸ್ಥಾನದ ಪ್ರದೇಶದಲ್ಲಿ ಏಕಕಾಲದಲ್ಲಿ 2 ಸಾವಿರ ಭಕ್ತರು ತಂಗಬಹುದು ಎಂದು ಅಲ್ಲಿನ ಎಂಜಿನಿಯರ್‍‌ಗಳು ‘ಸನಾತನ ಪ್ರಭಾತ’ ದಿನಪತ್ರಿಕೆಯ ವರದಿಗಾರರಿಗೆ ಮಾಹಿತಿ ನೀಡಿದರು.

ಹೀಗಿದೆ ಕುಂಭಮೇಳದಲ್ಲಿ ಬಾಲಾಜಿ ದೇವಸ್ಥಾನ !

ತಿರುಪತಿಯಲ್ಲಿರುವ ಶ್ರೀ ಬಾಲಾಜಿ ದೇವಸ್ಥಾನವನ್ನು ವಿವಿಧ ರಾಜರ ಆಳ್ವಿಕೆಯಲ್ಲಿ ನಿರ್ಮಿಸಲಾಗಿದೆ. ಆ ರಾಜರ ಕಾಲದ ಕಲಾಕೃತಿಗೆ ಅನುಗುಣವಾಗಿ ದೇವಾಲಯದ ವಿವಿಧ ಭಾಗಗಳನ್ನು ನಿರ್ಮಿಸಲಾಗಿದೆ. ಅದೇ ರೀತಿ ದೇವಸ್ಥಾನದ ಪ್ರತಿಕೃತಿಯನ್ನು ಸಿದ್ಧಪಡಿಸಲಾಗಿದೆ. ಇದರಿಂದ ದೇವಸ್ಥಾನವನ್ನು ನಿರ್ಮಿಸಿರುವ ರಾಜರನ್ನು ಸಹ ನಾಗರಿಕರು ನೆನಪಿಸಿಕೊಳ್ಳುತ್ತಾರೆ. ದೇವಸ್ಥಾನದ ಹೊರಗೆ ಒಂದು ಧ್ವಜಸ್ತಂಭವನ್ನು ಸಹ ನಿರ್ಮಿಸಲಾಗಿದೆ.

ತಿರುಪತಿ ದೇವಸ್ಥಾನದಂತೆಯೇ ಎಲ್ಲಾ ಧಾರ್ಮಿಕ ವಿಧಿಗಳು !

ಬೆಳಿಗ್ಗೆ 6 ಗಂಟೆಗೆ ದೇವರಿಗೆ ಹೂವುಗಳನ್ನು ಅರ್ಪಿಸಲಾಗುತ್ತದೆ. ಇದನ್ನು ‘ತೋಮಾಲ’ ಎಂದು ಕರೆಯಲಾಗುತ್ತದೆ. ವೈಕುಂಠದಲ್ಲಿ, ಬ್ರಹ್ಮ ದೇವರು ಶ್ರೀ ವಿಷ್ಣುವಿಗೆ ತಿಥಿಗಳನ್ನು ಹೇಳುತ್ತಾರೆ. ಅದೇ ರೀತಿ, ದೇವಸ್ಥಾನದಲ್ಲಿ, ಮುಖ್ಯ ಪಂಡಿತರು ಶ್ರೀ ಬಾಲಾಜಿಗೆ ತಿಥಿಗಳು ಮತ್ತು ವಿಶೇಷ ದಿನಗಳನ್ನು ಹೇಳುತ್ತಾರೆ. ಈ ವಿಧಿಗೆ ‘ಕುಲವು’ ಎಂದು ಕರೆಯಲಾಗುತ್ತದೆ. ಇದಾದ ನಂತರ, ಶ್ರೀ ವಿಷ್ಣು ಸಹಸ್ರನಾಮದ ಮೂಲಕ ಶ್ರೀ ಬಾಲಾಜಿಗೆ ತುಳಸಿ ಪತ್ರಗಳ ಪೂಜೆ ಮತ್ತು ಭೋಗ ಅಂದರೆ ನೈವೇದ್ಯವನ್ನು ಅರ್ಪಿಸಲಾಗುತ್ತದೆ. ಸಂಜೆ ೪ ಗಂಟೆಗೆ, ಭಗವಂತನನ್ನು ಉಯ್ಯಾಲೆಯ ಮೇಲೆ ತೂಗಾಡಿಸಲಾಗುತ್ತದೆ. ಇದನ್ನು ‘ಉಂಜಲ್’ ಸೇವೆ ಎಂದು ಕರೆಯಲಾಗುತ್ತದೆ. ಅದರ ನಂತರ, ಭಗವಂತನ ಶೋಭಾಯಾತ್ರೆ ನಡೆಸಲಾಗುತ್ತದೆ. ಸಂಜೆ 7 ಗಂಟೆಗೆ ಸಾಯಂಕಾಲದ ಪೂಜೆ ಮತ್ತು ರಾತ್ರಿ 8 ಗಂಟೆಗೆ ರಾತ್ರಿಯ ನೈವೇದ್ಯವನ್ನು ತೋರಿಸಲಾಗುತ್ತದೆ.