ಪ್ರಯಾಗರಾಜ ಕುಂಭ ಮೇಳ 2025
ಸುಪ್ರಸಿದ್ಧ ಗಾಯಕರು, ನೃತ್ಯ ಕಲಾಕಾರರ ಕಾರ್ಯಕ್ರಮಗಳನ್ನು ಜನರಿಗೆ ವೀಕ್ಷಿಸಲು ಸಾಧ್ಯವಾಗುತ್ತದೆ
ಪ್ರಯಾಗರಾಜ, ಜನವರಿ 16 (ಸುದ್ದಿ.) – ಕುಂಭನಗರಿಗೆ ಸಮಯ ಕಡಿಮೆ ಇತ್ತು; ಆದರೂ ಎಲ್ಲರ ಸಹಕಾರದಿಂದ, ಇಲ್ಲಿಯವರೆಗೆ 2 ಸ್ನಾನಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ಕೆಲವು ಭಕ್ತರು ಹೊರಟುಹೋದರು. ಕೆಲವರು ಇನ್ನೂ ಇಲ್ಲಿದ್ದಾರೆ. ಈಗ ಮುಂದಿನ ಸ್ನಾನವೂ ಎಲ್ಲರ ಸಹಕಾರದೊಂದಿಗೆ ಉತ್ತಮವಾಗಿ ನೆರವೇರಲಿದೆ ಎಂದು ಉಪಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯ ಇಲ್ಲಿ ವಿಶ್ವಾಸ ವ್ಯಕ್ತಪಡಿಸಿದರು. ಕುಂಭನಗರದ ಸೆಕ್ಟರ್ 1 ರಲ್ಲಿರುವ ಉತ್ತರ ಪ್ರದೇಶ ಸರಕಾರದ ‘ಗಂಗಾ ಪೆಂಡಾಲ’ದಲ್ಲಿ ಅವರ ಹಸ್ತದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಶುಭಾರಂಭವಾಯಿತು. ಆ ಸಮಯದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಈ ಕಾರ್ಯಕ್ರಮದಲ್ಲಿ ಇಂದು ಪ್ರಸಿದ್ಧ ಗಾಯಕ ಶಂಕರ ಮಹಾದೇವನ ಪ್ರದರ್ಶನವಿತ್ತು. ಇನ್ನು ಮುಂದೆ, ಪ್ರತಿದಿನ ಗಾಯಕ ಮಹೇಶ ಕಾಳೆ, ಪಾರ್ವತಿ ಬಾವೂಲ, ಸೋನು ನಿಗಮ, ಮೈಥಿಲಿ ಠಾಕೂರ ಮುಂತಾದ ಪ್ರಸಿದ್ಧ ಗಾಯಕರಿಂದ ಕಾರ್ಯಕ್ರಮಗಳು ಇರುತ್ತವೆ. ಇಂದು, ಒಡಿಸ್ಸಿ ನೃತ್ಯ ಕಲಾವಿದರು ಪ್ರದರ್ಶನ ನೀಡಿದರು. ಇಂದಿನಿಂದ, ಪ್ರತಿದಿನ, ಭಾರತದಾದ್ಯಂತದ ನೃತ್ಯ ಕಲಾವಿದರು ಇಲ್ಲಿ ತಮ್ಮ ನೃತ್ಯವನ್ನು ಪ್ರದರ್ಶಿಸುತ್ತಾರೆ.
ಈ ಸಮಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದಾಗ, ಪತ್ರಕರ್ತರೊಬ್ಬರು ಮಹಾಕುಂಭದ ಸಮಯದಲ್ಲಿ ಶಿಬಿರವೊಂದರಲ್ಲಿ ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ ಯಾದವ ಅವರ ಪ್ರತಿಮೆಯನ್ನು ಸ್ಥಾಪಿಸಿರುವ ಬಗ್ಗೆ ಪ್ರಶ್ನಿಸಿದರು. ಇದರ ಬಗ್ಗೆ ಉಪಮುಖ್ಯಮಂತ್ರಿ ಮೌರ್ಯ ಮಾತನಾಡಿ, “ಇಂತಹ ವಿವಾದಾತ್ಮಕ ವಿಷಯಗಳನ್ನು ಎತ್ತಬಾರದು; ಏಕೆಂದರೆ ಕುಂಭಮೇಳದ ಆಯೋಜನೆ ಸಂಪೂರ್ಣ ರಾಜ್ಯದ ನೈತಿಕ ಜವಾಬ್ದಾರಿಯಾಗಿದೆ. ಎಲ್ಲರೂ “ಅತಿಥಿ ದೇವೋ ಭವ’ ಎಂಬ ಮನೋಭಾವದಿಂದ ಪ್ರೇರಿತರಾಗಬೇಕು’, ಎಂದು ಅವರು ಪ್ರತಿಕ್ರಿಯಿಸಿದರು.