ಕೋಲಕಾತಾ (ಬಂಗಾಳ) – ‘ಡಿಜಿಟಲ್ ಅರೆಸ್ಟ್’ ಹಗರಣದ ಪ್ರಮುಖ ಆರೋಪಿಯನ್ನು ಕೊಲಕಾತಾ ಪೊಲೀಸರು ಬೆಂಗಳೂರಿನಿಂದ ಬಂಧಿಸಿದ್ದಾರೆ. ಅವನ ಹೆಸರು ಚಿರಾಗ್ ಕಪೂರ್ ಎಂದು ಗುರುತಿಸಲಾಗಿದೆ. ಆತನ ವಿರುದ್ಧ 930 ಪ್ರಕರಣಗಳಿದ್ದು, ಕೋಟ್ಯಂತರ ರೂಪಾಯಿ ಲೂಟಿ ಮಾಡಿರುವುದು ಪತ್ತೆಯಾಗಿದೆ. ಕೊಲಕಾತಾ ನಿವಾಸಿ ದೇಬಶ್ರೀ ದತ್ತಾ ಅವರ ಹೆಸರನ್ನು ಬಳಸಿಕೊಂಡು ಪಾರ್ಸೆಲ್ ಕಳುಹಿಸಲಾಗಿತ್ತು. ಅದರಲ್ಲಿ ಮಾದಕ ಪದಾರ್ಥ ಪತ್ತೆಯಾಗಿದೆ ಎಂದು ಸುಳ್ಳು ಅಧಿಕಾರಿಯೊಬ್ಬರು ವೀಡಿಯೊ ಕರೆ ಮಾಡಿದ್ದ. ಕಾನೂನು ಕ್ರಮ ಕೈಗೊಳ್ಳುವಂತೆ ಬೆದರಿಸುವ ಮೂಲಕ ವಂಚಕರು ದತ್ತಾ ಅವರಿಗೆ 47 ಲಕ್ಷ ರೂಪಾಯಿ ವಂಚಿಸಿದ್ದಾರೆ. ಈ ಪ್ರಕರಣದ ತನಿಖೆ ನಡೆಸುತ್ತಿರುವಾಗ, ಪೊಲೀಸರು ಕಪೂರ್ ನನ್ನು ಬಂಧಿಸಿದರು. ಆತನ ಜೊತೆಗೆ ಇತರ 10 ಜನರನ್ನು ಸಹ ಬಂಧಿಸಲಾಯಿತು.
‘ಚಿಂತಕ್ ರಾಜ್’ ಎಂದೇ ಖ್ಯಾತರಾದ ಚಿರಾಗ್ ಕಪೂರ್ ಬೆಂಗಳೂರಿನ ಜೆ.ಪಿ.ಯಲ್ಲಿ ವಾಸಿಸುತ್ತಿದ್ದ. ತನ್ನನ್ನು ತಾನು ಸಾಫ್ಟ್‌ವೇರ್ ಎಂಜಿನಿಯರ್ ಎಂದು ಕರೆದುಕೊಳ್ಳುವ ಕಪೂರ್ ಕಳೆದ 7 ತಿಂಗಳಿನಿಂದ ಈ ಗ್ಯಾಂಗ್ ಅನ್ನು ನಡೆಸುತ್ತಿದ್ದ. ದಾಳಿ ನಡೆಸಿದ ಮನೆಯಿಂದ ಕೆಲವು ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರಿಶೀಲಿಸಲಾಗುವುದು.
‘ಡಿಜಿಟಲ್ ಅರೆಸ್ಟ’ ಎಂದರೇನು ?
ಸಂತ್ರಸ್ತರನ್ನು ವಂಚಿಸಲು ಅಪರಾಧಿಗಳ ಗುಂಪುಗಳು ಪೊಲೀಸರು, ಜಾರಿ ನಿರ್ದೇಶನಾಲಯ, ಸಿಬಿಐ ಆದಾಯ ತೆರಿಗೆ ಇಲಾಖೆ ಮತ್ತು ಸೇನಾ ಅಧಿಕಾರಿಗಳಂತೆ ನಟಿಸುತ್ತಾರೆ. ದೇಶ ವಿರೋಧಿ ಚಟುವಟಿಕೆಗಳು, ಅಕ್ರಮ ಸರಕುಗಳು, ಮಾದಕ ಪದಾರ್ಥಗಳು, ನಕಲಿ ಪಾಸ್‌ಪೋರ್ಟ್‌ಗಳು ಮತ್ತು ಭಯೋತ್ಪಾದಕರೊಂದಿಗಿನ ಹಣಕಾಸಿನ ವ್ಯವಹಾರ ಮಾಡಿರುವುದಾಗಿ ಹೇಳಿ ಅವರು ‘ಡಿಜಿಟಲ್ ಅರೆಸ್ಟ’ (ಆನ್‌ಲೈನ್ ಬಂಧನ) ಮಾಡಲಾಗಿದೆ ಎಂದು ಹೇಳಿಕೊಳ್ಳುತ್ತಾರೆ. ಇದರಲ್ಲಿ, ಸಂತ್ರಸ್ತನನ್ನು 24 ಗಂಟೆಗಳ ಕಾಲ ವೀಡಿಯೊ ಕರೆಯ ಮೂಲಕ ತನ್ನ ಸ್ವಂತ ಮನೆಗೆ ಸೀಮಿತವಾಗಿರಲು ಕೇಳಲಾಗುತ್ತದೆ. ಸೈಬರ್ ಅಪರಾಧಿಗಳು ವಿಡಿಯೋ ಕರೆಗಳ ಮೂಲಕ ಪೊಲೀಸ್ ಠಾಣೆ ಅಥವಾ ಸಿಬಿಐನಂತಹ ಸಂಸ್ಥೆಯ ಕಡೆಯಿಂದ ಮಾತನಾಡುತ್ತಿರುವಂತೆ ನಟಿಸುತ್ತಾರೆ. ಆದ್ದರಿಂದ, ಸಂತ್ರಸ್ತೆಗೆ ವಿಶ್ವಾಸ ಮೂಡುತ್ತದೆ. ಸಂತ್ರಸ್ತ ತನ್ನನ್ನು ನಿಜವಾಗಿಯೂ ‘ಡಿಜಿಟಲ್ ಅರೆಸ್ಟ’ ಮಾಡಲಾಗಿದೆ ಎಂದು ನಂಬಲು ಪ್ರಾರಂಭಿಸುತ್ತಾನೆ. ಸೈಬರ್ ಅಪರಾಧಿ ಅವರಿಂದ ಸುಲಿಗೆ ಕೇಳುತ್ತಾನೆ. ಹಣ ನೀಡದಿದ್ದರೆ ಪ್ರತ್ಯಕ್ಷವಾಗಿ ಬಂಧಿಸುವುದಾಗಿ ಬೆದರಿಕೆ ಹಾಕುತ್ತಾರೆ. ಆದ್ದರಿಂದ, ಅನೇಕ ಜನರು ಇದಕ್ಕೆ ಬಲಿಯಾಗುತ್ತಾರೆ ಮತ್ತು ಹಣವನ್ನು ಪಾವತಿಸುವ ಮೂಲಕ ಇದರಿಂದ ಮುಕ್ತರಾಗುತ್ತಾರೆ.