Mahakumbh Robot Fire Fighting : ಮಹಾಕುಂಭಮೇಳದಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಅತ್ಯಾಧುನಿಕ ತಂತ್ರಜ್ಞಾನದ ಬಳಕೆ !

ಪ್ರಯಾಗರಾಜ್, ಜನವರಿ 12 (ಸುದ್ದಿ.) – ಮಹಾಕುಂಭ ನಗರದಲ್ಲಿ ಅಪಾರ ಪ್ರಮಾಣದಲ್ಲಿ ಮರದ ವಸ್ತುಗಳನ್ನು ಬಳಸಿ ಮಂಟಪಗಳು, ಡೇರೆಗಳು ಮತ್ತು ವಿವಿಧ ರಚನೆಗಳನ್ನು ನಿರ್ಮಿಸಲಾಗಿದೆ. ಆದ್ದರಿಂದ, ಇಲ್ಲಿ ಬೆಂಕಿಯ ಸಂಭಾವ್ಯತೆಯನ್ನು ಗಮನದಲ್ಲಿಟ್ಟುಕೊಂಡು ಬೆಂಕಿ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುವುದು ಅವಶ್ಯಕವಾಗಿದೆ. ಬೆಂಕಿ ಹೊತ್ತಿಕೊಂಡರೆ ಅದನ್ನು ಬೇಗನೆ ನಂದಿಸಲು ಆಧುನಿಕ ತಂತ್ರಜ್ಞಾನವನ್ನು ಬಳಸಲಾಗುವುದು. ಕುಂಭ ಕ್ಷೇತ್ರದಲ್ಲಿ 220 ಅಗ್ನಿಶಾಮಕ ಠಾಣೆಗಳನ್ನು ಸ್ಥಾಪಿಸಲಾಗಿದೆ. ಇದಲ್ಲದೆ, ಅತ್ಯಾಧುನಿಕ ‘ಎಟಿವಿ’ ವಾಹನಗಳು ಮತ್ತು ‘ಫಾಯರ್ ರೋಬೋಟ್‌’ಗಳನ್ನು ವ್ಯವಸ್ಥೆ ಮಾಡಲಾಗಿದೆ.

ಎಟಿವಿ ವಾಹನಗಳು ಯಾವುವು?

ಗಂಗಾ ನದಿಯಲ್ಲಿ ನಡೆಯುವ ಕುಂಭಮೇಳಕ್ಕಾಗಿ ಆಡಳಿತವು ಕಬ್ಬಿಣದ ಪ್ಲೆಟ್‌ಗಳನ್ನು ಬಳಸಿ ರಸ್ತೆಗಳನ್ನು ನಿರ್ಮಿಸಿದ್ದರೂ, ಈ ರಸ್ತೆಗಳಲ್ಲಿ ಮರಳು ಆಗಾಗ್ಗೆ ಸಂಗ್ರಹವಾಗುವುದರಿಂದ ಮತ್ತು ನೀರಿನಿಂದ ಅವು ಕೆಸರುಮಯವಾಗಿಸುವುದರಿಂದ ದ್ವಿಚಕ್ರ ವಾಹನಗಳು ಜಾರಿಬೀಳುವ ಅಪಾಯವಿದೆ. ಕೆಲವು ರಸ್ತೆಗಳು ಕಿರಿದಾಗಿರುವುದರಿಂದ, ಅಗ್ನಿಶಾಮಕ ನಾಲ್ಕು ಚಕ್ರ ವಾಹನಗಳು ಹಾದುಹೋಗಲು ಕಷ್ಟವಾಗುತ್ತದೆ. ಅಂತಹ ಸಮಯದಲ್ಲಿ, ಈ ಮರಳು ಭೂಪ್ರದೇಶದಲ್ಲಿ ತ್ವರಿತ ಚಲನೆಯನ್ನು ಸಕ್ರಿಯಗೊಳಿಸಲು ಅತ್ಯಾಧುನಿಕ ATV ವಾಹನಗಳನ್ನು (ಆಲ್ ಟೆರೈನ್ ಫೈಟಿಂಗ್ ವೆಹಿಕಲ್) ತರಲಾಗಿದೆ. ಈ ವಾಹನಗಳು ಬೆಂಕಿಯ ಸ್ಥಳವನ್ನು ತಲುಪಲು ಮತ್ತು ಬೆಂಕಿಯನ್ನು ನಂದಿಸಲು ಮರಳು ಮತ್ತು ಮಣ್ಣನ್ನು ಸುಲಭವಾಗಿ ದಾಟಬಹುದು. ಈ ವಾಹನಗಳು ಅಗ್ನಿಶಾಮಕ ಉಪಕರಣಗಳು, ನೀರಿನ ಟ್ಯಾಂಕ್‌ಗಳು, ಪಂಪ್‌ಗಳು, ಏರ್ ಕಂಪ್ರೆಸರ್‌ಗಳು, ಅಗ್ನಿಶಾಮಕಗಳನ್ನು ಹೊಂದಿದ್ದು, ನೀರು ಮತ್ತು ಫೋಮ್ ಅನ್ನು ಸಿಂಪಡಿಸುವ ಸಾಮರ್ಥ್ಯವನ್ನು ಹೊಂದಿವೆ. ಈ ವಾಹನಗಳನ್ನು ಜರ್ಮನಿಯಿಂದ ತರಿಸಲಾಗಿದ್ದು, ಇದರ ಮೌಲ್ಯ ತಲಾ 2.5 ಕೋಟಿ ರೂಪಾಯಿ ಇದೆ. ಈ ವಾಹನಗಳನ್ನು ಓಡಿಸಲು ಅಗ್ನಿಶಾಮಕ ದಳದವರಿಗೆ ವಿಶೇಷ ತರಬೇತಿ ನೀಡಲಾಗಿದೆ.

ಅಗ್ನಿಶಾಮಕ ರೋಬೋಟ್!

ಕುಂಭಮೇಳದಲ್ಲಿ ಮೊದಲ ಬಾರಿಗೆ ಎಟಿವಿ ವಾಹನಗಳ ಜೊತೆಗೆ ಅಗ್ನಿಶಾಮಕ ರೋಬೋಟ್‌ಗಳನ್ನು ಸಹ ನಿಯೋಜಿಸಲಾಗಿದೆ. ಈ ಸಣ್ಣ ಗಾತ್ರದ ರೋಬೋಟ್‌ಗಳನ್ನು ವಿಶೇಷವಾಗಿ ತರಬೇತಿ ಪಡೆದ ಅಗ್ನಿಶಾಮಕ ಅಧಿಕಾರಿಗಳು ನಿರ್ವಹಿಸುತ್ತಾರೆ. ಈ ರೋಬೋಟ್‌ಗಳು ದುರ್ಗಮ ಪ್ರದೇಶಗಳಿಗೆ ಹೋಗಿ ಬೆಂಕಿಯನ್ನು ನಂದಿಸಬಲ್ಲವು.